Tuesday 6 November, 2012

ಮನ್ಯಂತಿದ್ಮೇಲೆ ಹಿಂದ್ಗಡೆ ಹಿತ್ಲಂತಿರದು


ಸ್ವಾರೆ ಕಾಯ್ಕೊಡಕ್ಕೆ ಮನೆಮ್ಯಾಕೆ
ಸರ್ರನೆ ಹಭ್ತಿದ್ ಬೀಳು
ಬಾಳೆಲೆಯಂಗೆ
ಬೇಗ ಬಾಗಲ್ಲ ಕನ..!

ಹದ್ವಾಗಿ ಹಬ್ಬೋ
ಬಸ್ಲೆ ಸೊಪ್ಪಿನ್ ಬಳ್ಳಿ
ದರ್ಗೆಲೆಹಂಗೆ ಯಾವಾಗ್ಬೇಕಾರ
ದರಿಗುರ್ಳಲ್ಲ ಕನ...!

ಅಲ್ಲಲ್ಲಿ ಬೆಳ್ಯೋ
ಹರ್ವೆಸೊಪ್ಪು-ದಂಟಿನ್ಸೊಪ್ಪು
ಕಣುಗ್ಲೆಸೊಪ್ಪು-ಬೆರ್ಕೆಸೊಪ್ಪು
ಬೂದ್ಗನ್ನಡಿಲ್ ಹುಡ್ಕಿರು ಕಾಣ್ದಂಗಾದ್ವಲ್ಲೋ..!

ಕೆರಿದ್ದಿದ್ರೆ ಕೆಸಿನ್ಸೊಪ್ ಸಿಗಾವು
ಕೆಸಿನೆಲೆ ಬುಡ್ದಲ್ಲಿ ಕೆಸಿನ್ಗೆಡ್ಡೆ ಇರಾವು
ಗೆರೆ ಇದ್ದಿದ್ರೆ ಗೆಡ್ಡೆಗೆಣ್ಸ್ ಸಿಗಾವು
ಕಾಂಕ್ರಿಟ್ ಬಂದ್ ಕೆರೆ-ಗೆರೆ ಮಾಯ್ವಾದ್ವಲ್ವೇನ..?

ಕಾಂಪೌಂಡ್ ಬರೋ ಮುಂಚ್ಗೆ
ಬೇಲಿ ಅಡೇಲಿ ಅನಾನಸ್ ಗಿಡ ಕಾಣವು
ಬೇಲಿ ಮೂಲೆಲಿ ಪಪ್ಪಾಯ್ ಗಿಡಿರಾವು
ಮನೆ ಹಿಂದ್ಗಡೆ ಟಮಾಟೋ ಗಿಡ ಇದ್ದೇಇರಾದಲ್ವೇನಾ..?

ಮನಿ ಮುಂದ್ಗಡೆ ಅಂಗ್ಳಿರಾದು
ಮನ್ಯಂತಿದ್ಮೇಲೆ ಹಿಂದ್ಗಡೆ ಹಿತ್ಲಂತಿರದು
ಅಂಗಯಗುಲುದ್ ಜಾಗ್ದಲ್ಲಿ ಆಕಾಶ್ದ್ ಎತ್ರುಕ್ಕೆ
ಮಾಡಿಮನೆ ಕಟ್ಟಂಗಾದ್ಮೇಲೆ ಕಣ್ಗಾಣವೆಲ್ಲ
ಮಾಯ್ವಾಗೋದ್ವು ಅಲ್ವೇನಾ...?!?
-ಮಯಾಸ

No comments:

Post a Comment