Monday 8 April, 2013

ಪೆಪ್ರುಮಿಟಾಯಿ ಬಣ್ಣ ನಾಲ್ಗಿಗತ್ತಿರದಲ್ವೆನಾ...?

ವೋದೋಕ್ -ಬರ್ಯೋಕ್ 
ಬತ್ತಿದಿದ್ದು ಅಷ್ಟೇ ಆದ್ರುವೆ
ರಿಜಲ್ಟಿನ್ ದಿನ್ಮಾತ್ರ ಅತ್ತು ಕರ್ದು 
ನಾಕಾಣಿನೋ-ಯಂಟಾಣಿನೋ ಇಸ್ಕಂಡೋಗವಲ್ವೆನಾ..???

ಪಾಸು-ಪೇಲಾದೋರ್ ಪಟ್ಟಿ
ಬೋಲ್ಡಲ್ಲಿ ನ್ಯಾತಾಕ್ಕೋ ಮುಂಚ್ಗೆನೇ
ಇಸ್ಕಂದ್ ಬಂದ್ ಕಾಸು ಕರ್ಚಾಗ್ಬುಟ್ಟಿರದು
ಪೆಪ್ರುಮಿಟಾಯಿ ಬಣ್ಣ ನಾಲ್ಗಿಗತ್ತಿರದಲ್ವೆನಾ...?

ಪಟ್ಟಿ ಹಾಕಿದ್ ಕೂಡ್ಲೆ
ಮೇಟ್ ಕಾಲಲ್ ನಿಂತು ಹೆಸ್ರುಡ್ಕವಿ
ಒಂದ್ವರ್ಸನೂ ಮ್ಯಾಲಿಂದ ಕೆಳಿಕ್ ಪಟ್ಟಿ ನೋಡ್ಲಿಲ್ಲ
ಕೆಳ್ಗಿಂದ ಪಟ್ಟಿ ನೋಡ್ಕಂಡೇ ಹೋಗವಿ ಅಲ್ವೆನಾ...?

ಪಾಸಾದ್ರೂ-ಪೇಲಾದ್ರು ಅದೇ ಕ್ವಾಣೆ-ಅದೇ ಮೇಷ್ಟ್ರು
ಅದೇ ಬೆತ್ತುದ್ ಕೋಲಿನ ಹ್ವಡ್ತ-ಅವೇ ಬೋಗ್ಳ
ಹೆತ್ತೋರ್ ಗ್ವತ್ತು:ಅನ್ನೋ ಕಾರುಣ್ಕೆ ಪಾಸ್ಮಾಡ್ಬುಡರು
ಪಾಸಾಗ್ಬುಟ್ವಿ ಅನ್ನೋದ್ಕಾಗಿ ಮತ್ತಿಸ್ಕೂಲ್ಗೋಗವಿ....!

ಒದ್ಕಂದ್ ಕಲುತ್ಕಂದ್ ಯೋನಾಗ್ಬೇಕಾಗೈತಿ...??
ಅಂತ್ ಅನುಸ್ದಾಗೆಲ್ಲ-ಅಜ್ಜಿ-ಅಜ್ಜ ಬದ್ಕಿ ಬಾಳಿಲ್ವಾ ಅಂತನ್ಕಳ್ಳವಿ
ಪರೀಕ್ಷಿಗ್ ಹಿಂದಿನ್ದಿನ ಉರೊಡ್ಯಕ್ ಕೂರವಿ-
ರಾತ್ರಿಡಿ ಉರೊಡ್ದಿದ್-ಬರ್ಯೋಕ್ ಕುಂತಾಗ ಮರ್ತೋಗ್ಬುಟ್ಟಿರದಲ್ಲೆನಾ...???

ಬೆಟ್ಟ ಗುಡ್ಡುದ್ ನಡ್ವೆ ಮನೆ-ಇಸ್ಕೂಲು
ಚ್ವಳಿಗಾಲ್ದಾಗ ಚಳಿ ಜಾಸ್ತಿ ಮೂರೊತ್ತು ಬೆಂಕಿ ಕಾಯ್ಸ್ಕೊಳ್ಳವಿ
ಮಳ್ಗಾಲ್ದಾಗ ನಾಕ್ಸುತ್ತು ಎರುಚ್ಲು ಹ್ವಡ್ಯದು ಸೀತಾಗದು-ಜ್ವರ್ಬರದು
ಬೇಸ್ಗೆಲ್ಲಂತು ಕವ್ಲಿಲೋ-ಹ್ವಳಿಲೋ ಈಜೊಡ್ಕಂಡ್ ಹಾಯಾಗಿರವಿ...!

ಚಳ್ಗಾಲ-ಮಳ್ಗಾಲ-ಬ್ಯಾಸ್ಗೆಕಾಲ ಕಳ್ಯೋದ್ರೊಳ್ಗೆ
ಹಿಂಗ್ ಸುರಾದ್ ಇಸ್ಕೋಲಲ್ಲಿ ಮತ್ ಪರೀಕ್ಷೆ ಬಂದ್ಬುಡದು
ಅಡ್ಡೇಟ್ ಮ್ಯಾಲೆ ಗುಡ್ಡೇಟು-ತೋಚಿದ್ ಗೀಚ್ಬರವಿ
ಹಾಳಾಗೋಗ್ಲಿ ಅಂತ್ ಮೇಷ್ಟ್ರು ಮತ್ ಮುಂದುಕ್ ದೂಕರಲ್ವೆನಾ..????

ಒದಾದ್ ನಿಲ್ಸಿದ್ಮ್ಯಾಕೆ ಗೊತ್ತಾಗಿದಲ್ವೆನಾ...?
ಹಿಂದುಕ್ ತಳ್ಳೋರ್ ನಡ್ವೆ ಮುಂದ್ಕೆ ಹ್ವಾಗಕ್ಕೆ
ಮ್ಯಾಲಿಂದ ರಿಸಲ್ಟು ನೋಡ್ಬೇಕಿತ್ತಂತ ಅಲ್ವೆನಾ..?
ಈಗ್ ಸುಮ್ಕೆ ಕೆಳಿಕ್ಕು-ಮ್ಯಾಕು ನೋಡ್ಕಂಡ್ ಇರ್ಲೇಬೇಕಲ್ವೆನಾ..?!?

--ಮಯಾಸ

No comments:

Post a Comment